
ಕನಾ೯ಟಕ ರಾಜ್ಯದ ಸಹಕಾರ ಸಂಘಗಳ ಮಾತೃ ಸಂಸ್ಥೆ ಎನಿಸಿಕೊಂಡಿರುವ ಕನಾ೯ಟಕ ರಾಜ್ಯ ಸಹಕಾರ ಮಹಾಮಂಡಳವು ಸಹಕಾರ ಕ್ಷೇತ್ರದ ಸವ೯ತೋಮುಖ ಬೆಳವಣಿಗೆಯ ಉದ್ದೇಶದೊಂದಿಗೆ ದಿನಾಂಕ: 27.08.1924 ರಂದು “ಮೈಸೂರು ಪ್ರಚಾರಕ ಸಹಕಾರ ಸಂಘ” ಎಂಬ ಹೆಸರಿನಲ್ಲಿ ಸ್ಥಾಪಿತವಾಯಿತು.1925 ಜನವರಿ ಮಾಹೆಯಲ್ಲಿ ಮೈಸೂರು ಸಹಕಾರ ಪತ್ರಿಕೆ ಎಂಬ ಹೆಸರಿನ ಮಾಸ ಪತ್ರಿಕೆಯನ್ನು ಪ್ರಾರಂಭಿಸಲಾಯಿತು.
ಸಹಕಾರ ಕ್ಷೇತ್ರದ ಬಗ್ಗೆ ಅಭಿಮಾನ,ಒಲವು ಇರಿಸಿಕೊಂಡಿದ್ದ ಕೆಲವು ಸಮಾನ ಮನಸ್ಕ ಸಹಕಾರಿಗಳು ರಾಜ್ಯದ ಸಹಕಾರ ಕ್ಷೇತ್ರವನ್ನು ಆರೋಗ್ಯಕರವಾಗಿ ಬೆಳೆಸಲು ಅಗತ್ಯವಾದ ಸಹಕಾರ ಶಿಕ್ಷಣ,ತರಬೇತಿ ಮತ್ತು ಪ್ರಚಾರವನ್ನು ಒದಗಿಸುವ ಉದ್ದೇಶವನ್ನು ಇಟ್ಟುಕೊಂಡು ಸಂಘವನ್ನು ನೋಂದಣಿ ಮಾಡಿಸಿದರು.ರಾಜಕಾರ್ಯ ಪ್ರಸಕ್ತ ಎಂ.ಶಾಮರಾವ್ ಅವರು ಈ ಸಂಸ್ಥೆಯ ಸ್ಥಾಪಕ ಅಧ್ಯಕ್ಷರು.ಆರಂಭಕ್ಕೆ ಅಂದಿನ ಮೈಸೂರು ಅರಸರ ನೆರವು ಸಂಘಕ್ಕೆ ದೊರಕಿರುವುದು ಕಂಡು ಬರುತ್ತದೆ.ಸಣ್ಣ ಪ್ರಮಾಣದಲ್ಲಿ ಸಹಕಾರ ಶಿಕ್ಷಣ,ತರಬೇತಿ ನೀಡುವ ಕಾರ್ಯದ ಅಡಿಯಲ್ಲಿ ಸಹಕಾರ ತತ್ವದ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಸಂಘದಿಂದ ಆರಂಭವಾಯಿತು.
1956 ರಲ್ಲಿ ಭಾಷಾವಾರು ಪ್ರಾಂತ್ಯಗಳ ರಚನೆಯಿಂದ ಸಹಕಾರ ಕ್ಷೇತ್ರದ ಆಡಳಿತ ವ್ಯಾಪ್ತಿಯು ಹೆಚ್ಚಿ ಸಹಕಾರ ಸಂಘ ಸಂಸ್ಥೆಗಳ ಸಂಖ್ಯೆಯು ಅಧಿಕಗೊಂಡು ಮೈಸೂರು ಪ್ರಾಂತೀಯ ಸಹಕಾರ ಸಂಘದ ಕಾರ್ಯ ಹೆಚ್ಚಳವಾದುದು ಸಹಜವಾಗಿದ್ದಿತು.1956 ರಲ್ಲಿ ಈ ಸಂಘವನ್ನು ಮೈಸೂರು ರಾಜ್ಯ ಸಹಕಾರಿ ಯೂನಿಯನ್ ಎಂದು ಮರುನಾಮಕರಣ ಮಾಡಲಾಯಿತು.1969 ಜೂನ್ ಮಾಹೆಯಿಂದ ಸಹಕಾರ ವಾರಪತ್ರಿಕೆಯನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಯಿತು.
1987 ಏಪ್ರಿಲ್ 27ರಂದು ಕನಾ೯ಟಕ ಸಕಾ೯ರ ಆದೇಶವೊಂದನ್ನು ಹೊರಡಿಸಿ ರಾಜ್ಯದ 4 ರಾಜ್ಯ ಮಟ್ಟದ ಸಹಕಾರ ಸಂಸ್ಥೆಗಳನ್ನು ಒಗ್ಗೂಡಿಸಿ ಕನಾ೯ಟಕ ರಾಜ್ಯ ಸಹಕಾರ ಮಹಾಮಂಡಳ ನಿ.,ಎಂಬ ಹೆಸರಿನಲ್ಲಿ ಹೊಸ ಸಂಸ್ಥೆಯನ್ನು ನೋಂದಣಿ ಮಾಡಿತು.ಅಂದಿನಿಂದ ಸಹಕಾರ ಮಹಾಮಂಡಳ ತನ್ನ ಕಾರ್ಯಚಟುವಟಿಕೆಗಳನ್ನು ವೃದ್ಧಿಸಿಕೊಂಡು ಹೆಚ್ಚು ಜನರನ್ನು ತಲುಪುತ್ತಾ ಸಹಕಾರ ಚಳುವಳಿಯ ಆರೋಗ್ಯಕರ ಬೆಳವಣಿಗೆಗೆ ನಿರಂತರ ಶ್ರಮಿಸುತ್ತಾ ಬಂದಿದೆ.ಸಹಕಾರ ಮಹಾಮಂಡಳದ ಧ್ಯೇಯೋದ್ದೇಶ ಹಾಗೂ ಕಾರ್ಯಚಟುವಟಿಕೆಗಳು ರಾಜ್ಯದ 29 ಜಿಲ್ಲಾ ಸಹಕಾರ ಯೂನಿಯನ್ನುಗಳ ಮೂಲಕ ನಿರಂತರವಾಗಿ ನಡೆಯುತ್ತಾ ಬಂದಿವೆ.ಜಿಲ್ಲಾ ಸಹಕಾರ ಯೂನಿಯನ್ಗಳು ಆಯಾ ಜಿಲ್ಲೆಯ ಮಾಹಿತಿ ಕೇಂದ್ರಗಳಾಗಿ,ಮಹಾಮಂಡಳದ ಸದಸ್ಯ ಸಂಘಗಳಾಗಿ ಕಾರ್ಯ ನಿವ೯ಹಿಸುತ್ತಿವೆ.

ಅಧ್ಯಕ್ಷರು,ಕನಾ೯ಟಕ ರಾಜ್ಯ ಸಹಕಾರ ಮಹಾಮಂಡಳ ನಿ.,ಬೆಂಗಳೂರು